ಕೋವಿಡ್‌ನಿಂದ ರಕ್ಷಣೆ ಒದಗಿಸುವ ಸೇಫ್‌ ಬೆಂಚ್‌ ತಯಾರಿಸಿದ ಫರಿದಾಬಾದ್‌ನ 10ನೇ ತರಗತಿ ವಿದ್ಯಾರ್ಥಿನೀಯರು

ಫರಿದಾಬಾದ್‌ನ ಶಿವ ನಾದರ್‌ ಶಾಲೆಯ 5 ವಿದ್ಯಾರ್ಥಿನೀಯರ ತಂಡವೊಂದು ಸ್ವಯಂ ಶುದ್ಧಿಗೊಳ್ಳುವ ಬೆಂಚ್ ತಯಾರಿಸಿದ್ದು, ಒಬ್ಬರು ಕೂತು ಹೋದ ನಂತರ ಬೆಂಚ್‌ ತಾನಾಗೇ ಶುದ್ಧಿಗೊಳ್ಳುತ್ತದೆ.

ಕೋವಿಡ್‌ನಿಂದ ರಕ್ಷಣೆ ಒದಗಿಸುವ ಸೇಫ್‌ ಬೆಂಚ್‌ ತಯಾರಿಸಿದ ಫರಿದಾಬಾದ್‌ನ 10ನೇ ತರಗತಿ ವಿದ್ಯಾರ್ಥಿನೀಯರು

Thursday February 18, 2021,

1 min Read

ಫರಿದಾಬಾದ್‌ನ ಶಿವ ನಾದರ್‌ ಶಾಲೆಯ 5 ವಿದ್ಯಾರ್ಥಿನೀಯರ ತಂಡವೊಂದು ಸೇಫ್‌ ಬೆಂಚ್‌ ಎಂಬ ಸ್ವಯಂ ಶುದ್ಧಿಗೊಳ್ಳುವ ಬೆಂಚ್ ತಯಾರಿಸಿದ್ದಾರೆ. ಬೆಂಚ್‌ಗೆ ಯುವಿ ಕ್ರಿಮಿನಾಶಕ ಲೈಟ್‌ ಅಳವಡಿಸಲಾಗಿದ್ದು, ಅದು ವೈರಲ್ ಕಾಂಜಂಕ್ಟಿವಿಟಿಸ್, ಇನ್ಫ್ಲುಯೆನ್ಸ, ಹೆಪಟೈಟಿಸ್ ಎ, ಮತ್ತು ಕೋವಿಡ್‌-19 ಸೇರಿದಂತೆ ಇತರೆ ಹರಡುವ ಸೋಂಕುಗಳನ್ನು ಕೊಲ್ಲುತ್ತದೆ.


ಈ ಸೇಫ್‌ ಬೆಂಚ್‌ ಅನ್ನು ಶಾಲೆಯ ವಾರ್ಷಿಕ ತಂತ್ರಜ್ಞಾನ ಕಾರ್ಯಕ್ರಮವಾದ ‘ಕೊಲ್ಲೊಕ್ವಿಮ್‌ 2020ʼ ನಲ್ಲಿ ಪ್ರದರ್ಶಿಸಿ ನಾವೀನ್ಯತೆಗಾಗಿ ದ್ವಿತೀಯ ಬಹುಮಾನ ಪಡೆದಿದ್ದಾರೆ. 10 ನೇ ತರಗತಿ ವಿದ್ಯಾರ್ಥಿಗಳಾದ ನಿರ್ವಾಣಿ ಜೈನ್, ಅರ್ಷಿಯಾ ಜೇಟ್ಲಿ, ಸುಹಾನಿ ಶರ್ಮಾ, ಗುರ್ನೂರ್ ಕೌರ್, ಮತ್ತು ಮಾನ್ಸಿ ಅಗರ್‌ವಾಲ್ - ಈ ಸೇಫ್‌ ಬೆಂಚುಗಳನ್ನು ಶಾಲಾ ಆವರಣದಲ್ಲಿ ಇರಿಸಲು ಯೋಜಿಸಿದ್ದಾರೆ.


“ಆಸ್ಪತ್ರೆ, ಉದ್ಯಾನ, ಮಾಲ್‌ ಮತ್ತು ಇತರ ಹೊರಾಂಗಣದ ಸಾರ್ವಜನಿಕ ಸ್ಥಳಗಳನ್ನು ಬಳಸುವ ಜನರಿಗಾಗಿ ಸ್ವಯಂ ಶುದ್ಧಿಗೊಳ್ಳುವ ಬೆಂಚ್‌ ಒಟ್ಟಾರೆಯಾಗಿ ಪರಿಹಾರ ಒದಗಿಸುತ್ತದೆ ಎಂಬುದು ನಮ್ಮ ಅಭಿಪ್ರಾಯ,” ಎಂದು ಮಾನ್ಸಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದಳು.


ಯಾರಾದರೂ ಬೆಂಚಿನ ಮೇಲೆ ಕುಳಿತು ಎದ್ದರೆ ಸೇಫ್‌ ಬೆಂಚ್‌ನಲ್ಲಿ ಅಳವಡಿಸಲಾಗಿರುವ ಸೆನ್ಸರ್‌ ಸ್ವಯಂಚಾಲನೆಗೊಂಡು ಇಡೀ ಬೆಂಚ್‌ ಅನ್ನು ವ್ಯವಸ್ಥಿತವಾಗಿ ಶುಚಿಗೊಳಿಸುತ್ತದೆ. ಅದಲ್ಲದೆ ಬೆಂಚ್‌ಗೆ ಕ್ಯೂಆರ್‌ ಕೋಡ್‌ ಅಳವಡಿಸಲಾಗಿದ್ದು ಅದು ಕೊನೆಯ ಬಾರಿ ಶುಚಿಮಾಡಿದ ವಿವರಗಳನ್ನು ತಿಳಿಸುತ್ತದೆ.

ಸೇಫ್‌ ಬೆಂಚ್‌ (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)


“ಹೊರಗಡೆ ಹೋಗುವ ಜನರು ಸುರಕ್ಷತಾ ಭಾವದಿಂದ ಕೂತು ವಿಶ್ರಾಂತಿ ಪಡೆಯಬೇಕೆಂಬುದು ನಮ್ಮ ಧ್ಯೇಯ. ಹೊರಗೆ ಹೋದಾಗ ಕೊರೊನಾ ಸೋಂಕು ತಾಗುವ ಭಯವನ್ನು ಕಡಿಮೆ ಮಾಡಬೇಕೆನ್ನುವುದು ನಮ್ಮ ಆಸೆ. ಜೂಮ್‌, ಗೂಗಲ್‌ ಮೀಟ್‌ನಲ್ಲಿ ಚರ್ಚಿಸುತ್ತ ಮತ್ತು ಶಾಲೆಗೆ ಹೋಗುತ್ತಲೆ ನಾವು ಹತ್ತು ತಿಂಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿದೆವು,” ಎನ್ನುತ್ತಾಳೆ ಗುರ್ನೂರ್‌.


ಸೇಫ್‌ ಬೆಂಚ್‌ ತಯಾರಿಸಲು 8,000 ರೂ. ಖರ್ಚಾಗುತ್ತದೆ ಮತ್ತು ಇದನ್ನು ಶಾಲಾ ಪಠ್ಯಕ್ರಮದ ಭಾಗವಾಗಿ ಕ್ಯಾಪ್‌ಸ್ಟೋನ್‌ ಯೋಜನೆಯಲ್ಲಿ ವಿನ್ಯಾಸಗೊಳಿಸಲಾಗಿದೆ.

“ಸೇಫ್‌ ಬೆಂಚ್‌ ಯೋಜನೆ ಹಿಂದಿರುವ ನಮ್ಮ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿನಿಯರ ಶಕ್ತಿ ಮುಖ್ಯವಾದದ್ದು, ವಿನ್ಯಾಸ ಸಿದ್ಧಪಡಿಸಿ ಕೆಲಸ ಮಾಡುವ ಮಾಡುವ ಮಾದರಿಯನ್ನು ತಯಾರಿಸಿಲು ಹುಡುಗಿಯರು ತುಂಬಾ ಶ್ರಮಪಟ್ಟಿದ್ದಾರೆ,” ಎಂದು ಮುಖ್ಯೋಪಾಧ್ಯಾಯರಾದ ಅಂಜು ವೈ ದಿ ಟ್ರಿಬ್ಯುನ್‌ಗೆ ಹೇಳಿದರು.