ನಾಗರಿಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಿ ಯುವಕರನ್ನು ಸಜ್ಜುಗೊಳಿಸುತ್ತಿರುವ ನಾಗಾಲ್ಯಾಂಡ್‌ನ ಐಪಿಎಸ್‌ ಅಧಿಕಾರಿ

ನಾಗರಿಕ ಸೇವಾ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ತರಬೇತಿ ಮತ್ತು ವ್ಯಸಕ್ಕೀಡಾದವರಿಗೆ ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ ಪ್ರಿತಪಲ್‌ ಕೌರ್‌.

ನಾಗರಿಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಿ ಯುವಕರನ್ನು ಸಜ್ಜುಗೊಳಿಸುತ್ತಿರುವ ನಾಗಾಲ್ಯಾಂಡ್‌ನ ಐಪಿಎಸ್‌ ಅಧಿಕಾರಿ

Wednesday February 17, 2021,

2 min Read

ಜನೇವರಿ 20 2021ರಂದು ನಾಗಾಲ್ಯಾಂಡ್‌ನ ನೋಕ್ಲಾಕ್‌ ಪ್ರದೇಶವನ್ನು ಜಿಲ್ಲೆ ಎಂದು ಘೋಷಿಸಲಾಯಿತು. 2011ರ ಗಣತಿಯ ಪ್ರಕಾರ ನೋಕ್ಲಾಕ್‌ನ ಜನಸಂಖ್ಯೆ 7,674 ಆಗಿದ್ದು ಅದರಲ್ಲಿ ಶೇ. 48 ರಷ್ಟು ಮಹಿಳೆಯರಿದ್ದಾರೆ ಮತ್ತು ಅಲ್ಲಿನ ಸಾಕ್ಷರತಾ ಪ್ರಮಾಣ ಶೇ. 83 ರಷ್ಟಿದೆ. ಇಷ್ಟೆಲ್ಲ ಉತ್ತಮ ಅಂಶಗಳಿದ್ದರು ಆ ಪ್ರದೇಶ ಮಾದಕ ದ್ರವ್ಯ ಮತ್ತು ವ್ಯಸನಕ್ಕೆ ಹೊರತಾಗಿಲ್ಲ.


2016ರ ಬ್ಯಾಚ್‌ನ ಪೊಲೀಸ್‌ ಅಧಿಕಾರಿ ಮತ್ತು ಆ ಪ್ರದೇಶದ ಅಧೀಕ್ಷಕರಾದ ಪ್ರಿತ್‌ಪಲ್‌ ಕೌರ್‌ ಅವರು ಈ ಸಮಸ್ಯೆಯನ್ನು ಒಂದು ಅವಕಾಶವಾಗಿಸಕೊಂಡು ಸ್ಥಳೀಯರಿಗೆ ಸಹಾಯ ಮಾಡುತ್ತಿದ್ದಾರೆ.

ನೋಕ್ಲಾಕ್‌ ಜಿಲ್ಲೆಯಲ್ಲಿ ಡಾ. ಪ್ರಿತ್‌ಪಲ್‌ ಕೌರ್‌ ಅವರ ತರಗತಿಗೆ ಹಾಜರಾದ ವಿದ್ಯಾರ್ಥಿಗಳು (ಚಿತ್ರಕೃಪೆ: ಮೊರುಂಗ್‌ ಎಕ್ಸ್‌ಪ್ರೆಸ್‌)


ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಜತೆ ಮಾತನಾಡಿದ ಕೌರ್‌, “ನೋಕ್ಲಾಕ್‌ ಮಯನ್ಮಾರ್‌ನೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ ಮತ್ತು ದೇಶದ ಅತಿ ದೂರದ ಜಿಲ್ಲೆ ಇದಾಗಿದೆ. ಇಲ್ಲಿ ಮೂಲಸೌಕರ್ಯದ ಕೊರತೆಯಿದೆ. ನಾನು ಕೆಲಸಕ್ಕೂ ಮೊದಲು ಬೆಳಿಗ್ಗೆ ತುಸು ಸಮಯ ತೆಗೆದಿಟ್ಟು ಅವರ ಜೀವನಕ್ಕೆ ಒಂದು ಹೊಸ ದಿಕ್ಕು ಕೊಡಲು ಯೋಚಿಸಿದೆ,” ಎಂದರು.


ಹತ್ತಿರದ ಟುಯೆನ್ಸಾಂಗ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಲೆ ನಾಗರಿಕ ಸೇವಾ ಪರೀಕ್ಷೆಗಳ ಆಕಾಂಕ್ಷಿಗಳಿಗೆ ತರಬೇತಿ ನೀಡುವ ಯೋಚನೆ ಅವರಲ್ಲಿ ಮೂಡಿತು. ಸಾಮಾಜಿಕ ಮಾಧ್ಯಮದ ಮೂಲಕ ಹಲವರನ್ನು ತಲುಪಿ ಇತರ ಪೊಲೀಸ್‌ ಅಧಿಕಾರಿಗಳು ಮತ್ತು ಆಡಳಿತ ಮಂಡಿಳಿಯೊಂದಿಗೆ ಸೇರಿ ತರಗತಿಗಳನ್ನು ಪ್ರಾರಂಭಿಸಿದರು.


ಮೊರುಂಗ್ ಎಕ್ಸ್‌ಪ್ರೆಸ್ ಪ್ರಕಾರ, ಎಸ್‌ಪಿ ಕಚೇರಿಯ ಸಭಾ ಭವನದಲ್ಲಿ ವಿವಿಧ ವಿಭಾಗೀಯ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ತರಗತಿಗಳು ನಡೆಯುತ್ತಿದ್ದು, ಕೌರ್, ಯಿತಾಚು ಇಎಸಿ ನೋಕ್ಲಾಕ್ ಸುಹಾಸ್ (45 ಅಸ್ಸಾಂ ರೈಫಲ್ಸ್) ಮತ್ತು ನೋಕ್ಲಾಕ್‌ನ ಸರ್ಕಾರಿ ನೌಕರರಾದ ಅಂಕಿತ್ ಅವರು ಪಾಠ ಮಾಡುತ್ತಿದ್ದಾರೆ.


ವಿದ್ಯಾರ್ಥಿಗಳು ಮತ್ತು ಪಾಠ ಮಾಡುವವರು ಇಬ್ಬರಿಗೂ ಕೆಲಸಕ್ಕೆ ಹೋಗಲು ಅನುಕೂಲವಾಗಲು ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ತರಗತಿಗಳನ್ನು ನಡೆಸಲಾಗುತ್ತದೆ. ಕೌರ್‌ ತಮ್ಮ ಅರ್ಧ ವೇತನವನ್ನು ವಿದ್ಯಾರ್ಥಿಗಳಿಗೆ ಪುಸ್ತಕ ನೀಡಲು ಬಳಸುತ್ತಾರೆ. ಅದಲ್ಲದೆ ಓದಿಗೆ ಬೇಕಾದ ವಸ್ತುಗಳನ್ನು ಮತ್ತು ನಿಯಮಿತವಾಗಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ.


ಇಲ್ಲಿನ ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳ ಜತೆಗೆ ಸಿಬ್ಬಂದಿ ಆಯ್ಕೆ ಆಯೋಗ(ಎಸ್‌ಎಸ್‌ಸಿ), ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಬ್ಯಾಂಕ್, ಮತ್ತು ರಾಜ್ಯಮಟ್ಟದ ಇಲಾಖಾ ಪರೀಕ್ಷೆಗಳಿಗಾಗಿಯೂ ತರಬೇತಿ ನೀಡಲಾಗುತ್ತದೆ. ಮೊದಲ ದಿನದ ತರಗತಿಗೆ 28 ಆಕಾಂಕ್ಷಿಗಳು ಬಂದರೆ ಮರುದಿನ ಆ ಸಂಖ್ಯೆ ಮೂವತ್ತಕ್ಕೇರಿತು.


“ಇಲ್ಲಿನ ವಿದ್ಯಾರ್ಥಿಗಳು ತುಂಬಾ ಪ್ರತಿಭಾವಂತರು ಆದರೆ ಆರ್ಥಿಕ ಸಮಸ್ಯೆ ಮತ್ತು ಅವಕಾಶಗಳ ಕೊರತೆ ಅವರ ಯಶಸ್ಸಿನ ಹಾದಿಯಲ್ಲಿ ಅಡ್ಡಿಯಾಗಿವೆ. ಹಾಗಾಗಿ ನಾವು ಎಲ್ಲ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಸಮಾನ ಅವಕಾಶ ನೀಡಲು ನಿರ್ಧರಿಸಿದೆವು. ಒಬ್ಬ ಸಶಕ್ತ ವಿದ್ಯಾರ್ಥಿ ಸಶಕ್ತ ಸಮಾಜವನ್ನು ಕಟ್ಟುತ್ತಾನೆ,” ಎಂದರು ಕೌರ್‌.


2020 ರಲ್ಲಿ ಇದೆ ರೀತಿಯ ತರಬೇತಿಯನ್ನು ಟುಯೆನ್ಸಾಂಗ್ನಲ್ಲಿ ಜಿಲ್ಲಾ ಪೊಲೀಸ್‌ ಮತ್ತು ಅಧಿಕಾರಿಗಳು ನೀಡಿದ್ದರು, ಅಲ್ಲಿನ ಏಳು ವಿದ್ಯಾರ್ಥಿಗಳು ನಾಗಾಲ್ಯಾಂಡ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಮುಖ್ಯ ಪರೀಕ್ಷೆಗೆ ಹಾಜರಾಗಲಿದ್ದಾರೆ.


ಐಪಿಎಸ್‌ ಅಧಿಕಾರಿಯಾಗುವುದಕ್ಕೂ ಮೊದಲು ಕೌರ್‌ ದಂತ ವೈದ್ಯರಾಗಿ ಹೈದರಾಬಾದ್‌ನಲ್ಲಿ ಕೆಲಸ ಮಾಡಿದ್ದರು. ಹಲ್ಲುಗಳ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಇವರು ಚಿಕಿತ್ಸೆ ನೀಡುತ್ತಾರೆ.


ಮಯನ್ಮಾರ್‌ಗೆ ಅಂಟಿಕೊಂಡಿರುವ ಅಂತರಾಷ್ಟ್ರೀಯ ಗಡಿಯಿಂದ ಇಲ್ಲಿ ಮಾದಕ ದ್ರವ್ಯದ ವ್ಯಸನ ಹೆಚ್ಚಾಗಿದೆ. ಕೌರ್‌ ಮಾದಕ ದ್ರವ್ಯ ನಿಗ್ರಹ ದಳ ಕಟ್ಟಿ ಸಮುದಾಯ, ಎನ್‌ಜಿಒ ಮತ್ತು ಇತರೆ ನಾಯಕರನ್ನು ಒಂದೆಡೆ ಸೇರಿಸಿ ಸಮಸ್ಯೆಯನ್ನು ಬಗೆಹರಿಸುತ್ತಿದ್ದಾರೆ. ಪ್ರೀತಿ, ಆರೈಕೆ ಮತ್ತು ಅನುಭೂತಿ ವ್ಯಸನವನ್ನು ತಡೆಯುತ್ತದೆ ಎನ್ನುತ್ತಾರವರು. ಇತ್ತೀಚೆಗೆ ಇವರು ಚಿಕಿತ್ಸೆ ಪಡೆಯುತ್ತಿರುವ 100 ಮಾದಕ ದ್ರವ್ಯ ವ್ಯಸನಿಗಳನ್ನು ಭೇಟಿ ಮಾಡಿ ಹೇಗೆ ಜೀವನಕ್ಕೆ ಆದಾಯದ ಮಾರ್ಗ ಸೃಷ್ಟಿಸಿಕೊಳ್ಳಬೇಕು ಎಂಬುದರ ಸಮಾಲೋಚನೆ ನಡೆಸಿದ್ದಾರೆ.